Distraction Free Reading

ಪ್ಲಾಟಫಾರ್ಮ್ ಕಾರ್ಮಿಕರ ಸಂಘಟನಾ ಪಯಣ: ಸಂಶೋಧಕರಿಗೆ ಪ್ಲಾಟಫಾರ್ಮ್ ಕಾರ್ಮಿಕ-ಸಂಘಟನಾಕಾರರ ಕಿವಿಮಾತುಗಳು

ಕಾವೇರಿ ಮೇದಪ್ಪ ಅನುವಾದಿಸಿದ್ದಾರೆ [1]

ಈ ಲೇಖನವು ಲೇಬರ್ ಟೆಕ್ ರಿಸರ್ಚ್ ನೆಟ್‌ವರ್ಕ್‌ನ ಸದಸ್ಯರು ಬರೆದ ಭಾರತದ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಸಂಘಗಳ ಸರಣಿಯ ಐದನೆಯದು. ಸರಣಿಯ ಪರಿಚಯವನ್ನು ಇಲ್ಲಿ ಓದಿ, ಸರಣಿಯ ಎರಡನೇ ಪೋಸ್ಟ್ ಅನ್ನು ಇಲ್ಲಿ, ಮೂರನೇ ಪೋಸ್ಟ್ ಅನ್ನು ಇಲ್ಲಿ ಮತ್ತು ನಾಲ್ಕನೇ ಪೋಸ್ಟ್ ಅನ್ನು ಇಲ್ಲಿ ಓದಿ. ಮೇಲಿನ ಎಲ್ಲಾ ಪೋಸ್ಟ್‌ಗಳು ಇಂಗ್ಲಿಷ್ ಭಾಷೆಯಲ್ಲಿವೆ.


ಪ್ಲಾಟಫಾರ್ಮ್ ಕಾರ್ಮಿಕರ ಕುರಿತು ಬೆಳೆಯುತ್ತಿರುವ ಸಂಶೋಧನೆಯಲ್ಲಿ ಕಾರ್ಮಿಕರ ಸಂಘಂಟನೆ, ಯೂನಿಯನ್ ಚಟುವಟಿಕೆ ಹಾಗು ಪ್ಲಾಟಫಾರ್ಮ್ ಕಂಪನಿಗಳ ವಿರುದ್ಧ ಕಾರ್ಮಿಕರ ಹೋರಾಟ ಪ್ರಮುಖ ವಿಷಯಗಳಾಗಿ ಹೊರಹೊಮ್ಮಿವೆ. ಇದೇ ಸಂದರ್ಭದಲ್ಲಿ ಸಂಶೋಧಕರ ಮತ್ತು ಪ್ಲಾಟ್‌ಫಾರ್ಮ್, ಗಿಗ್ ಕಾರ್ಮಿಕರ ಸಂಘಟನೆಗಳ ನಡುವೆ ಹೊಸ ಸಹಯೋಗಗಳೂ ನಡೆಯುತ್ತಿವೆ. ಹೆಚ್ಚಾನೆಚ್ಚು ಸಂಶೋಧಕರು ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿರುವಾಗ, ಸಂದರ್ಶನಗಳ ಮತ್ತು ವಿವಿಧ ರೀತಿಯ ಮಾಹಿತಿ ಸಂಗ್ರಹಣೆಗೆ ಸಂಬಂಧಿಸಿದ ನಿರಂತರ ವಿನಂತಿಗಳಿಂದ ಗಿಗ್ ಕಾರ್ಮಿಕರ ಹಾಗು ಸಂಘಟನಾಕಾರರ ಮೇಲೆ ಬೀಳುವ ಸಂಶೋಧನಾ ಆಯಾಸದ ಬಗ್ಗೆ ನಾವು ಗಮನವಹಿಸಬೇಕಿದೆ. ಶೋಷಣಾತ್ಮಕವಲ್ಲದ ರೀತಿಯಲ್ಲಿ ಈ ಕೆಲಸವನ್ನು ನಡೆಸಿದರೆ, ಸಂಶೋಧಕರು ಕಾರ್ಮಿಕ ಸಂಘಟನೆಗಳ ಜೊತೆಗೂಡಿ, ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಗಳಿಸಲು ಹಾಗೂ ಅವರ ಘನತೆಯನ್ನು ಎತ್ತಿಹಿಡಿಯಲು ನೆರವಾಗಬಹುದು.

ಇತ್ತೀಚೆಗೆ ಅನೇಕ ಸಂಶೋಧಕರು ಗಿಗ್ ಕಾರ್ಮಿಕರ ಮೇಲೆ  ಅಲ್ಲದೆ, ಕಾರ್ಮಿಕರ, ಅವರ ಸಂಘಟನೆಗಳ ಮತ್ತು ಪ್ಲಾಟಫಾರ್ಮ್ ಸೌಹಾರ್ದ ಸಂಸ್ಥೆಗಳ ಜೊತೆಯಲ್ಲಿ ಕೆಲಸ ಮಾಡುವ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ (ಉದಾಹರಣೆಗೆ, ಲೇಬರ್ ಟೆಕ್ ರಿಸರ್ಚ್ ನೆಟ್‌ವರ್ಕ್ ಮತ್ತು ಡೇಟಾ ವರ್ಕರ್ಸ್ ಇನ್ಕ್ವೈರಿ). ಈ ಸರಣಿಯ ಕೊನೆಯ ಲೇಖನದಲ್ಲಿ, ಇಂತಹ ಪ್ರಕ್ರಿಯೆಗಳನ್ನು ಬಲಪಡಿಸುವ ಉದ್ದೇಶದಿಂದ, ಭಾರತದ ಮೂವರು ಗಿಗ್ ಕಾರ್ಮಿಕ-ಸಂಘಟನಾಕಾರರಾದ ಮಂಜು ಗೋಯಲ್, ಅಬ್ದುಲ್ ನಯೀಮ್, ಮತ್ತು ಜಾವೇದ್ ಅವರೊಂದಿಗೆ ನಾವು ಮಾತುಕತೆ ನಡೆಸಿದ್ದೆವು. ಪ್ಲಾಟಫಾರ್ಮ್ ಕಾರ್ಮಿಕರ ಸಂಘಟನೆಯಲ್ಲಿ ಸಂಶೋಧಕರ ಪಾತ್ರವನ್ನು ಅವರು ಹೇಗೆ ನೋಡುತ್ತಾರೆ? ಪ್ಲಾಟಫಾರ್ಮ್ ಕಾರ್ಮಿಕರ ಸಂಘಟನೆಗಳಿಗೆ ಸಂಶೋಧಕರು ಯಾವ ರೀತಿಯಲ್ಲಿ ಬೆಂಬಲ ನೀಡಬಹುದು? ಇಂತಹ ಸಹಯೋಗಗಳನ್ನು ಆರಂಭಿಸುವಾಗ ನಾವು ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು? — ಈ ಪ್ರಶ್ನೆಗಳನ್ನು ನಾವು ಅವರ ಮುಂದಿಟ್ಟೆವು.

ಈ ಮೂರೂ ಸಂಭಾಷಣೆಗಳು ಹಿಂದಿ ಭಾಷೆಯಲ್ಲಿ ನಡೆದವು. ಲೇಖನವೊಂದನ್ನು ಸಿದ್ಧಪಡಿಸಲು ನಾವು ಪ್ರತಿಯೊಬ್ಬ ಕಾರ್ಮಿಕ ಸಂಘಟಕರಿಂದ ಪಡೆದ ಪ್ರತಿಕ್ರಿಯೆಗಳನ್ನು ಕ್ರೋಢೀಕರಿಸಿದೆವು; ಅಗತ್ಯವಿದ್ದೆಡೆ ಹಿನ್ನೆಲೆ ಮಾಹಿತಿಯನ್ನು ಸೇರಿಸಿದೆವು, ಪಠ್ಯವನ್ನು ಇಂಗ್ಲಿಷ್‌ಗೆ ಅನುವಾದಿಸಿದೆವು ಹಾಗೂ ಅದರ ಉದ್ದ ಮತ್ತು ಓಘವನ್ನು ಉತ್ತಮಗೊಳಿಸಲು ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಿದೆವು. ಅಂತಿಮಗೊಳಿಸುವ ಮೊದಲು, ಸಂಪೂರ್ಣ ಲೇಖನವನ್ನು ಹಿಂದಿ, ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಅನುವಾದಿಸಿ, ಮಂಜು, ನಯೀಮ್ ಭಾಯ್ ಮತ್ತು ಜಾವೇದ್ ಅವರಿಗೆ ಅವರ ಅನುಮೋದನೆ ಹಾಗೂ ಪ್ರತಿಕ್ರಿಯೆಗಾಗಿ ಕಳುಹಿಸಲಾಯಿತು. ಡ್ರಾಫ್ಟ್‌ನಲ್ಲಿ ಸ್ಥಿರತೆಗಾಗಿ ತೆಲುಗು ಮತ್ತು ಕನ್ನಡದ ಒಬ್ಬ ಪ್ರಥಮ ಭಾಷೆಯ ಓದುಗರು ಪೋಸ್ಟ್ ಅನ್ನು ಪರಿಶೀಲಿಸಿದ್ದಾರೆ.

ಕಾರ್ಮಿಕರು ಮತ್ತು ಸಂಶೋಧಕರು: ಗಿಗ್ ಕಾರ್ಮಿಕರ ಹಕ್ಕುಗಳ ಹೋರಾಟದಲ್ಲಿ ಸಹಯೋಗಿಗಳು

ಜಾವೇದ್ ರವರ ಜೊತೆಗೆ ಅಂಬಿಕಾ ಟಂಡನ್ ರವರ ಸಂವಾದ

A man in a checkered shirt and blue jeans is balancing a heavy white package on the back of his green electric scooter.

ಜಾವೇದ್ ವಿತರಣೆಗಾಗಿ ತಮ್ಮ ಇವಿ (EV) ವಾಹನದಲ್ಲಿ ದೊಡ್ಡ ಪಾರ್ಸೆಲ್ ಅನ್ನು ಕೊಂಡೊಯ್ಯುತ್ತಿದ್ದಾರೆ. ಚಿತ್ರವನ್ನು ಅಂಬಿಕಾ ಟಂಡನ್ ಸೆರೆಹಿಡಿದಿದ್ದಾರೆ.

ನನ್ನ ಹೆಸರು ಜಾವೇದ್. ನಾನು ದೆಹಲಿಯಲ್ಲಿ ವಾಸವಾಗಿರುವ ಒಬ್ಬ ಗಿಗ್ ಕಾರ್ಮಿಕ. ಹಲವು ವರ್ಷಗಳಿಂದ ಆಪ್ ಆಧಾರಿತ ಡೆಲಿವರಿ ಮತ್ತು ರೈಡ್ ಸೇವೆಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಕೆಲಸದಲ್ಲಿ ನಮಗೆ ಹಲವಾರು ರೀತಿಯ ತೊಂದರೆಗಳು ಎದುರಾಗುತ್ತವೆ – ಕಡಿಮೆ ಆದಾಯ, ಪ್ರೋತ್ಸಾಹಧನದ (ಇನ್ಸೆಂಟಿವ್) ನಿಯಮಗಳಲ್ಲಿ ಆಗಾಗ ಬದಲಾವಣೆ, ಹೆಚ್ಚಿನ ಕಮಿಷನ್ ದರಗಳು, ಗ್ರಾಹಕರ ಒತ್ತಡ ಮತ್ತು ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳು. ಕಳೆದ ವರ್ಷ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಕಾರ್ಮಿಕರನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದ ಒಂದು ಸಂಘಟನೆಯ ಬಗ್ಗೆ ತಿಳಿದುಕೊಂಡೆ. ಕಾರ್ಮಿಕರು ಒಂದಾಗುವುದು ತುರ್ತು ಅಗತ್ಯ ಎಂದು ನನಗೆ ಅನಿಸಿದ್ದರಿಂದ ನಾನು ಕೂಡಲೇ ಅದಕ್ಕೆ ಸೇರಿದೆ. ನಮ್ಮ ಸಂಘಟನೆ ಹೆಸರು ರಾಜಧಾನಿ ಆಪ್ ವರ್ಕರ್ ಯೂನಿಯನ್. ಇದು ದೆಹಲಿಯ ಗಿಗ್ ಕಾರ್ಮಿಕರ ಹಕ್ಕುಗಳಿಗಾಗಿ ಮತ್ತು ಕೆಲಸದ ಪರಿಸ್ಥಿತಿಗಳ ಸುಧಾರಣೆಗಾಗಿ ಹೋರಾಡುತ್ತದೆ.

ಕಳೆದ ಒಂದು ವರ್ಷದಲ್ಲಿ ನಾನು ನೂರಾರು ರೈಡರ್‌ಗಳನ್ನು ಭೇಟಿಯಾಗಿ, ಅವರ ಸಮಸ್ಯೆಗಳನ್ನು ಕೇಳಿ, ಕಾರ್ಮಿಕ ಕಾನೂನುಗಳ ಬಗ್ಗೆ ಮಾಹಿತಿ ನೀಡಿದ್ದೇನೆ. ಸಂಘಟನೆಯ ಸದಸ್ಯನಾಗಿ ನಮ್ಮ ಮುಖ್ಯ ಕೆಲಸ ರೈಡರ್‌ಗಳ ಮಧ್ಯೆ ಪರಸ್ಪರ ಸಂಪರ್ಕ ಹುಟ್ಟಿಸಿ, ಅವರು ಒಟ್ಟಾಗಿ ಬರಲು ಸಾಧ್ಯ ಮಾಡುವುದು. ಈ ಕೆಲಸ ಸುಲಭವಲ್ಲ. ಮೊದಲ ಸಮಸ್ಯೆ ಎಂದರೆ, ಅನೇಕ ರೈಡರ್‌ಗಳಿಗೆ ಸಂಘಟನೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಸಂಘಟನೆ ಎಂದರೇನು, ಅದು ಹೇಗೆ ಸಹಾಯ ಮಾಡುತ್ತದೆ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಎರಡನೇ ದೊಡ್ಡ ಸವಾಲು ಕಾರ್ಮಿಕರಲ್ಲಿರುವ ಭಯದ ವಾತಾವರಣ. ಧ್ವನಿ ಎತ್ತಿದರೆ ಕಂಪನಿ ತಮ್ಮ ಖಾತೆಯನ್ನು ಬ್ಲಾಕ್ ಮಾಡಬಹುದು ಎಂಬ ಆತಂಕ. ಮೂರನೇ ಸಮಸ್ಯೆ ಎಂದರೆ ರೈಡರ್ ಗಳ ಕೆಲಸ ತುಂಬಾ ಸಮಯದ ಒತ್ತಡವಿರುವ ಕೆಲಸ. ದಿನವಿಡೀ ಆರ್ಡರ್‌ಗಳನ್ನು ಪೂರೈಸಬೇಕಾಗಿರುವುದರಿಂದ, ಮೀಟಿಂಗ್ ಗಳಿಗೆ ಅಥವಾ ಸಂಘಟನೆಯ ಬೇರೆ ಚಟುವಟಿಕೆಗಳಿಗೆ ಸಮಯವಿರುವುದಿಲ್ಲ. ಕೆಲವರು ಒಬ್ಬಂಟಿಯಾಗಿ ಕೆಲಸ ಮಾಡುವುದೇ ಮೇಲು, ಸಾಮೂಹಿಕ ಹೋರಾಟದಿಂದ ಯಾವುದೇ ದೊಡ್ಡ ಬದಲಾವಣೆ ಆಗುವುದಿಲ್ಲ ಎಂದು ಭಾವಿಸುವುದು ಮತ್ತೊಂದು ದೊಡ್ಡ ಸವಾಲು.

ಈ ಎಲ್ಲ ಸವಾಲುಗಳನ್ನು ಎದುರಿಸಲು ಅತ್ಯಂತ ಮುಖ್ಯವಾದದ್ದು ನೆಲಮಟ್ಟಕ್ಕೆ ಇಳಿದು ರೈಡರ್‌ಗಳೊಂದಿಗೆ ನೇರವಾಗಿ ಮಾತನಾಡುವುದು. ಮುಖಾಮುಖಿ ಮಾತುಕತೆ ನಡೆದಾಗ ವಿಶ್ವಾಸ ಹೆಚ್ಚುತ್ತದೆ. ವಾಟ್ಸಾಪ್ ಗುಂಪುಗಳು, ಸಾಮಾಜಿಕ ಜಾಲತಾಣಗಳು ಮತ್ತು ಸಣ್ಣ ಸಭೆಗಳೂ ರೈಡರ್‌ಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತವೆ. ಜೊತೆಗೆ, ಕಾರ್ಮಿಕರ ಹಕ್ಕುಗಳು ಮತ್ತು ಅವರಿಗೆ ಸಂಬಂಧಿಸಿದ ಕಾನೂನುಗಳನ್ನು ಸರಳ ಭಾಷೆಯಲ್ಲಿ ವಿವರಿಸುವುದು ಅಗತ್ಯ. ಸಂಘಟನೆಗಳು ಸಣ್ಣ ಸಮಸ್ಯೆಗಳನ್ನಾದರೂ ಬಗೆಹರಿಸಲು ನೆರವಾದರೆ ರೈಡರ್‌ಗಳ ವಿಶ್ವಾಸ ಇನ್ನಷ್ಟು ಹೆಚ್ಚುತ್ತದೆ.

ಕಾರ್ಮಿಕರನ್ನು ಒಗ್ಗೂಡಿಸಲು, ಮೊದಲು ನಮ್ಮೆಲರ ಸಮಸ್ಯೆಗಳು ಒಂದೇ ರೀತಿಯವು ಎಂಬುದನ್ನು ತಿಳಿ ಹೇಳುವುದು ಮುಖ್ಯ. ಧರ್ಮ, ಜಾತಿ ಅಥವಾ ಲಿಂಗ ಯಾವುದಾದರೂ ಆಗಿರಲಿ, ಕಡಿಮೆ ಆದಾಯ, ಆ ದಿನ ಕೆಲಸ ಸಿಗುವುದೋ ಇಲ್ಲವೋ ಎಂಬ ಆತಂಕ, ಮತ್ತು ಹಕ್ಕುಗಳ ಕೊರತೆಯನ್ನು ಹೆಚ್ಚಿನ ಕಾರ್ಮಿಕರು ಎದುರಿಸುತ್ತಾರೆ. ನಮ್ಮ ಮೊದಲ ಗುರುತು ನಾವು ಕಾರ್ಮಿಕರು ಎಂಬುದನ್ನು ಸಂಘಟನೆ  ಒತ್ತಿ ಹೇಳಬೇಕು. ಸಭೆಗಳಲ್ಲಿ ಮತ್ತು ಅಭಿಯಾನಗಳಲ್ಲಿ ಎಲ್ಲರಿಗೂ ಸಮಾನವಾಗಿ ಮಾತನಾಡಲು ಮತ್ತು ಭಾಗವಹಿಸಲು ಅವಕಾಶ ಸಿಗಬೇಕು. ಹೀಗೆ ಕಾರ್ಮಿಕರು ಪರಸ್ಪರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಆರಂಭಿಸಿದಾಗ ವಿಶ್ವಾಸ ಹೆಚ್ಚುತ್ತದೆ ಮತ್ತು ಅವರ ಸಾಮೂಹಿಕ ಶಕ್ತಿಯೂ ಬಲಗೊಳ್ಳುತ್ತದೆ.

ಕಾರ್ಮಿಕರ ಸಂಘಟನೆಯ ಪ್ರಕ್ರಿಯೆಯಲ್ಲಿ ಸಂಶೋಧಕರೂ ಪ್ರಮುಖ ಪಾತ್ರ ವಹಿಸಬಹುದು. ಯಾವ ರೈಡರ್‌ಗೆ ಆರ್ಡರ್ ಸಿಗುತ್ತದೆ, ಯಾವ ರೇಟಿಂಗ್ ಬರಬೇಕು ಅಥವಾ ಯಾರ ಖಾತೆ ನಿಷ್ಕ್ರಿಯಗೊಳ್ಳಬೇಕು ಎಂಬುದನ್ನು ಆಪ್‌ಗಳ ಅಲ್ಗೋರಿದಮ್‌ಗಳು ನಿರ್ಧರಿಸುತ್ತವೆ. ಅನೇಕ ಬಾರಿ ಕಡಿಮೆ ಆರ್ಡರ್‌ಗಳು ಏಕೆ ಬರುತ್ತಿವೆ ಎಂಬುದರ ಬಗ್ಗೆ ರೈಡರ್‌ಗಳಿಗೆ ಅರ್ಥವಾಗುವುದಿಲ್ಲ. ಸಮಯದ ಒತ್ತಡ ಮತ್ತು ರೇಟಿಂಗ್ ವ್ಯವಸ್ಥೆಯೂ ಹೆಚ್ಚು ವೇಗವಾಗಿ ಕೆಲಸ ಮಾಡಲು ಒತ್ತಾಯಿಸುತ್ತವೆ.

ಸಂಶೋಧಕರು ಗಿಗ್ ಕಾರ್ಮಿಕರ ನಿಜವಾದ ಕೆಲಸದ ಪರಿಸ್ಥಿತಿಗಳನ್ನು ಅಧ್ಯಯನ ಮಾಡಿ ನಮ್ಮ ಆದಾಯ, ಇನ್ಸೆಂಟಿವ್ ಮತ್ತು ಕೆಲಸದ ವ್ಯವಸ್ಥೆಗಳು ತಂತ್ರಜ್ಞಾನದ ಪರದೆಯ ಹಿಂದೆ ನಿಜವಾಗಿ ಹೇಗೆ ಕೆಲಸ ಮಾಡುವುದು, ಅದರಲ್ಲಿಅಡಗಿರುವ ಅನ್ಯಾಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕಾರ್ಮಿಕರೊಂದಿಗೆ ಹಂಚಿಕೊಳ್ಳಬಹದು. ಇಂತಹ ಮಾಹಿತಿ ಕಾರ್ಮಿಕಪರ ನೀತಿಗಳು ಮತ್ತು ಕಾನೂನುಗಳನ್ನು ರೂಪಿಸಲು ಬಹಳ ಮುಖ್ಯ ವಾಗುತ್ತದೆ. ಜೊತೆಗೆ, ಕಾರ್ಮಿಕರ ಧ್ವನಿಯನ್ನು ಸರ್ಕಾರ ಮತ್ತು ಸಾರ್ವಜನಿಕರಿಗೆ ತಲುಪಿಸಲು ಸಹ ಸಂಶೋಧಕರು ನೆರವಾಗಬಹುದು. ಸಂಶೋಧನ ವರದಿಗಳು ಸಾರ್ವಜನಿಕ ಅಭಿಪ್ರಾಯ ಮತ್ತು ನೀತಿ ರೂಪಿಸುವವರ ಮೇಲೂ ಪ್ರಭಾವ ಬೀರುತ್ತವೆ.

ನನ್ನ ಅಭಿಪ್ರಾಯದಲ್ಲಿ, ಸಂಶೋಧಕರು ಕಾರ್ಮಿಕರೊಂದಿಗೆ ಗೌರವ ಮತ್ತು ವಿಶ್ವಾಸದಿಂದ ಕೆಲಸ ಮಾಡಬೇಕು. ಕಾರ್ಮಿಕರ ಸಮಸ್ಯೆಗಳನ್ನು ಕೇವಲ ಅಂಕಿ-ಅಂಶಗಳಾಗಿ ನೋಡದೆ, ಅವರ ದೈನಂದಿನ ಬದುಕಿನ ಅನುಭವಗಳ ಮೂಲಕ ಅರ್ಥಮಾಡಿಕೊಳ್ಳಬೇಕು. ಇದರ ಜೊತೆಗೆ, ಕಾರ್ಮಿಕರ ಗುರುತು ಮತ್ತು ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು, ಹಾಗೂ ಅವರಿಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು. ಸಂಶೋಧನೆಯ ಫಲಿತಾಂಶಗಳನ್ನು ಕಾರ್ಮಿಕರೊಂದಿಗೆ ಹಂಚಿಕೊಳ್ಳುವುದೂ ಮುಖ್ಯ. ಹೀಗೆ ಮಾಡಿದರೆ ನಮ್ಮಅನುಭವಗಳಿಂದ ಎಂತಹ ವಿಶ್ಲೇಷಣೆ ಮಾಡಿದ್ದಾರೆ ಎಂದು ನಮಗೆ ತಿಳಿಯುತ್ತದೆ.

ಸಂಶೋಧಕರ-ಕಾರ್ಮಿಕ ಸಂಘಟನೆಗಳ ಮಧ್ಯೆ ಮೈತ್ರಿಗಳನ್ನು ಕಟ್ಟುವುದು

ಅಬ್ದುಲ್ ನಯೀಮ್ ರವರೊಂದಿಗೆ ಅನುಶ್ರೀ ಗುಪ್ತಾ ಮತ್ತು ಈಶಾ ಕುಂದೂರಿ ಅವರ ಸಂವಾದ

A man with black hair and a white patterned shirt is holding a mike and speaking.

ಸಭೆಯಲ್ಲಿ ಮಾತನಾಡಿದ ನಯೀಮ್ ಭಾಯ್. ಚಿತ್ರ ಒದಗಿಸಿದವರು ಈಶಾ ಕುಂದರಿ. ಚಿತ್ರ ಕೃಪೆ: ಮೊಹಮ್ಮದ್ ಸಬೇರುದ್ದೀನ್.

ಅಬ್ದುಲ್ ನಯೀಮ್ (ನಾವು ನಯೀಮ್ ಭಾಯ್ ಎಂದು ಕರೆಯುವವರು) ಹೈದರಾಬಾದ್‌ ಕೇಂದ್ರವಾಗಿರುವ ಸ್ವತಂತ್ರ, ಕಾರ್ಮಿಕರ ಯೂನಿಯನ್ ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಸಂಘಟನೆಯ (TGPWU) ಸಕ್ರಿಯ ಸದಸ್ಯರು. ತಾವೇ ಒಬ್ಬ ಕ್ಯಾಬ್ ಚಾಲಕರಾಗಿರುವುದರಿಂದ, ಗಿಗ್ ಕೆಲಸದ ವಾಸ್ತವತೆಗಳ ಬಗ್ಗೆ ಇರುವ ತಮ್ಮ ಆಳವಾದ ಅರಿವನ್ನು ಬಳಸಿಕೊಂಡು ಆಪ್-ಆಧಾರಿತ ಕಾರ್ಮಿಕರನ್ನು ಸಂಘಟಿಸಲು ಮತ್ತು ಸಂಘಟನೆ ಹೋರಾಟಗಳಿಗೆ ಬೆಂಬಲ ಕಟ್ಟಲು ಪ್ರಮುಖ ಪಾತ್ರವಹಿಸಿದ್ದಾರೆ. ಕಳೆದ ಏಳು ವರ್ಷಗಳಿಂದ ಅವರು TGPWU ಸದಸ್ಯತ್ವವನ್ನು ವಿಸ್ತರಿಸಲು ಶ್ರಮಿಸಿದ್ದಾರೆ. ನಗರದ ಬೀದಿಗಳಿಂದ ಹಿಡಿದು ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳಗಳವರೆಗೆ, ಚಾಲಕರಿಗೆ ಸಂಘಟನೆಯ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟು TGPWUಗೆ ಸೇರಲು ಪ್ರೋತ್ಸಾಹಿಸಿದ್ದಾರೆ. TGPWU ಸಂಘಟನೆಯು ತಮ್ಮ ಹೋರಾಟದಿಂದ ಯಶಸ್ಸನ್ನೂ ಗಾಳಸಿದ್ದಾರೆ. ಚಾಲಕರಿಗೆ ಡ್ರಾಪ್ ಲೊಕೇಶನ್‌ಗಳನ್ನು ಮುಂಚಿತವಾಗಿಯೇ ಕಾಣುವಂತೆ ಮಾಡಿಸಿದ್ದು, ಹಾಗೂ ವಾರಕ್ಕೊಮ್ಮೆ ಆದಾಯ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಡನೆ, ಸುಮಾರು ಮೂರು ವರ್ಷಗಳ ನಿರಂತರ ಹೋರಾಟದಿಂದ ತೆಲಂಗಾಣದಲ್ಲಿ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಕಲ್ಯಾಣಕ್ಕೆ ಮತ್ತು ಸಾಮಾಜಿಕ ಭದ್ರತೆಯ ಸಂಬಂಧಿಸಿದಂತೆ ಕಾನೂನು ಜಾರಿಯಾಗಿದೆ.

ಈ ಲೇಖನದಲ್ಲಿ, ಸಂಶೋಧಕರು ಮತ್ತು ಕಾರ್ಮಿಕ ಸಂಘಟನೆ ಸದಸ್ಯರ ನಡುವಿನ ಮೈತ್ರಿಗಳು ಏಕೆ ಮುಖ್ಯವೆಂಬುದರ ಬಗ್ಗೆ ನಯೀಮ್ ಭಾಯ್ ಅವರೊಂದಿಗೆ ನಾವು ಚರ್ಚಿಸುತ್ತಿದ್ದೇವೆ. 2022–23ರಿಂದ ಈ ಸಂಘಟನೆಯೊಂದಿಗೆ ಕೆಲಸ ಮಾಡುತ್ತಿರುವ ನಮಗೆ, ಹಲವಾರು ಸಂವಾದಗಳ ಮೂಲಕ ಸಂಶೋಧಕರು ಯಾವ ರೀತಿಯಲ್ಲಿ ಸಂಘಟನೆಗಳ ನೆರವಾಗಬಹುದು ಎಂಬುದರ ಕುರಿತು ಹೆಚ್ಚು ಸ್ಪಷ್ಟವಾದ ಅರಿವು ಮೂಡಿದೆ.

ನಯೀಮ್ ಭಾಯ್ ಪ್ರಕಾರ, ಮೊದಲನೆಯದಾಗಿ, ಸಂಶೋಧನ ಪ್ರಶ್ನೆಗಳು ಮೊದಲೇ ನಿಗದಿಯಾಗಿರಬಾರದು; ಅವು ಕಾರ್ಮಿಕರ ಬದಲಾಗುತ್ತಿರುವ ವಾಸ್ತವತೆಗಳಿಗೆ ಅನುಗುಣವಾಗಿರಬೇಕು. ಉದಾಹರಣೆಗೆ, ಆರ್ಥಿಕ ಸ್ವಾತಂತ್ರ್ಯ ನೀಡುತ್ತದೆ ಎಂಬ ಭರವಸೆಯಿಂದ ಅನೇಕ ವಿದ್ಯಾರ್ಥಿಗಳು ಮತ್ತು ಯುವಕರು ಗಿಗ್ ಕೆಲಸದತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ನಯೀಮ್ ಭಾಯ್ ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಈ ಕೆಲಸ ಅತ್ಯಂತ ಅನಿಶ್ಚಿತತೆಯಿಂದ ಕೂಡಿದೆ. ಇದರ ಜೊತೆಗೆ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಆಧಾರಿತ ತಂತ್ರಜ್ಞಾನಗಳ ವಿಸ್ತರಣೆಯು ಈಗಾಗಲೇ ಅಸ್ಥಿರತೆಯಿಂದ ಕೂಡಿದ ಉದ್ಯೋಗ ವಲಯಗಳಲ್ಲಿ ಮತ್ತಷ್ಟು ಆತಂಕ ಉಂಟುಮಾಡಿದೆ. ಈ ರೀತಿಯ ಹೊಸ ತಂತ್ರಜ್ಞಾನಗಳಿಂದ (e.g. ಡ್ರೋನ್ ಡೆಲಿವರಿಯಿಂದ) ಈಗಾಗಲೇ ಕೆಲಸ ಮಾಡುತ್ತಿರುವ ಕಾರ್ಮಿಕರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ಸಂಶೋಧಕರು ಅಧ್ಯಯನ ಮಾಡಬೇಕು ಎಂದು ಅವರು ಸೂಚಿಸುತ್ತಾರೆ. ತಂತ್ರಜ್ಞಾನ ಅಭಿವೃದ್ಧಿಯು ಉದ್ಯೋಗದ ಭವಿಷ್ಯದ ಮೇಲೆ ಬೀರುವ ದೀರ್ಘಕಾಲ ಪರಿಣಾಮಗಳು, ಹವಾಮಾನ ವೈಪರಿತ್ಯಕ್ಕೆ ಸಂಬಂಧಿಸಿದಂತೆ ಪ್ಲಾಟ್‌ಫಾರ್ಮ್ ಕಾರ್ಮಿಕರ ಮೇಲಾಗುವ ಪರಿಣಾಮ – ಇಂತಹ ಪ್ರಶ್ನೆಗಳನ್ನು ಸಂಶೋಧಕರು ಗಂಭೀರವಾಗಿ ಪರಿಗಣಿಸಬೇಕೆಂದು ನಯೀಮ್ ಭಾಯ್ ಒತ್ತಿ ಹೇಳುತ್ತಾರೆ.

ಎರಡನೆಯದಾಗಿ, ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ಲಾಟಫಾರ್ಮ್ ವಲಯದ ಕಾರ್ಮಿಕರ ಸಂಬಂಧಪಟ್ಟಂತೆ – ಅಪಘಾತಗಳು, ಐಡಿ ನಿಷ್ಕ್ರಿಯಗೊಳಿಸುವಿಕೆ – ಬದಲಾಗುತ್ತಿರುವ ಕಾನೂನುಬದ್ಧ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಇವುಗಳ ಬಗ್ಗೆ ಸಂಶೋಧಕರು ಸಂಘಟನೆಗಳಿಗೆ ಮಾಹಿತಿ ತಿಳಿಸಬಹುದು.

TGPWU ತನ್ನ ಬೇಡಿಕೆಗಳಿಗೆ ಸಾರ್ವಜನಿಕ ಬೆಂಬಲ ನಿರ್ಮಿಸಲು ಹಲವಾರು ವಿಧಾನಗಳನ್ನು ಉಪಯೋಗಿಸುತ್ತದೆ. ಮೊದಲಿಗೆ ಸಮಸ್ಯೆಗಳನ್ನು ಪ್ಲಾಟ್‌ಫಾರ್ಮ್ ಕಂಪನಿಗಳ ಮುಂದೆ ಪ್ರಸ್ತಾಪಿಸಲಾಗುತ್ತದೆ. ನಂತರ ಸರ್ಕಾರದ ಗಮನಕ್ಕೆ ತರಲಾಗುತ್ತದೆ. ಕೊನೆಯಲ್ಲಿ ಚಾಲಕರನ್ನು ಸಂಘಟಿಸಿ ಸಾರ್ವಜನಿಕ ಒತ್ತಡ ನಿರ್ಮಿಸಲಾಗುತ್ತದೆ. ನವಉದಾರೀಕರಣ  ಅಭಿವೃದ್ಧಿ ವ್ಯವಸ್ಥೆಯಲ್ಲಿಆಹಾರ ವಿತರಣೆ ಅಥವಾ ವೈದ್ಯಕೀಯ ಶಿಬಿರಗಳಂತಹ ಮಾನವೀಯ ಕಾರ್ಯಗಳಿಗೆ ಬೆಂಬಲ ಸುಲಭವಾಗಿ ದೊರೆಯುತ್ತದೆ ಹೊರತು, ಸಂವಿಧಾನಬದ್ಧ ಕಾರ್ಮಿಕ ಹಕ್ಕುಗಳ ಹೋರಾಟಗಳಿಗೆ ಬೆಂಬಲ ಸಿಗುವುದು ಕಷ್ಟಕರವಾಗಿದೆ. ಭಾರತದಲ್ಲಿ ಸಾಮಾಜಿಕ ಭದ್ರತೆಯ ಕುರಿತು ಹೆಚ್ಚು ಚರ್ಚೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ, ಸಂಶೋಧಕರು ಮತ್ತು ಕಾರ್ಮಿಕ ಸಂಘಟನೆಗಳು ಪ್ಲಾಟಫಾರ್ಮ್ ಕಾರ್ಮಿಕರ ಹಕ್ಕುಗಳ ಬಗೆಗಿನ ಪ್ರಶ್ನೆಯನ್ನು, ಚರ್ಚೆಗಳನ್ನೂ ಮುಂದಿಡಬೇಕು.

ಅಂತರರಾಷ್ಟ್ರೀಯ ಕಾನೂನು ಹೋರಾಟಗಳ ಬಗ್ಗೆ, ಕಾರ್ಮಿಕರ ಬದುಕಿನ ಅನುಭವಗಳ ಕುರಿತು, ಮತ್ತು ಕಾರ್ಮಿಕ ಸಂಬಂಧಿತ ಸೈದ್ಧಾಂತಿಕ ನೆಲೆಗಟ್ಟುಗಳ ಬಗ್ಗೆ ಸಂಶೋಧಕರಿಗೆ ಇರುವ ತಿಳುವಳಿಕೆಗಳನ್ನು ಕಾರ್ಮಿಕರ ಹಾಗು ಸಂಶೋಧಕರ ನಡುವಿನ ಸಹಯೋಗವನ್ನು ಮತ್ತಷ್ಟು ಬಲಿಷ್ಟಪಡಿಸಲು ಉಪಯೋಗಿಸಬಹುದು.

ಕೊನೆಯದಾಗಿ, ಸಹಯೋಗದ ಕೆಲಸವನ್ನು ಕೆಲವು “ಅತ್ಯುತ್ತಮ ಪದ್ಧತಿಗಳು” ಅಥವಾ “ಕ್ರಿಯಾಶೀಲ ಸಂಶೋಧನೆ” ಎಂಬ ಚೌಕಟ್ಟಿನಲ್ಲಿ ಬಂಧಿಸುವ ಪ್ರಯತ್ನಗಳನ್ನು ನಾವು ಮೀರಬೇಕು. ಅದರ ಬದಲು, ನೆಲಮಟ್ಟದ ಮೈತ್ರಿಗಳನ್ನು ಕಟ್ಟುವುದು ನಿರಂತರವಾದ ಬೌಧಿಕ ಹಾಗು ರಾಜ್ಯಕೀಯ ಪ್ರಕ್ರಿಯೆಯೆಂದೂ, ಅದರಲ್ಲಡಗಿದ ಕ್ಲಿಷ್ಟತೆಯನ್ನ ಸ್ವೀಕರಿಸಿ, ಒಪ್ಪಿಕೊಂಡು ಸಹಯೋಗಗಳನ್ನು ಕಟ್ಟಬೇಕಿದೆ (ನಗರ್, 2019).

ಸಂಶೋಧಕರ ಮತ್ತು ಗಿಗ್ ಕಾರ್ಮಿಕ ಸಂಘಟನಾಕಾರರ ನಡುವಿನ ಸೃಜನಾತ್ಮಕ ಸಹಯೋಗಗಳು

ಮಂಜು ಗೋಯಲ್ ಅವರೊಂದಿಗೆ ಈಶಾ ಭಲ್ಲಮುಡಿರವರ ಸಂವಾದ

Two women, one in a yellow saree and the other in a blue saree, are standing next to each other and smiling at the camera. One of them has a conference lanyard around her neck.

ಚಿತ್ರ 3: 2025ರಲ್ಲಿ ಜಿನೀವಾದಲ್ಲಿ ನಡೆದ ಅಂತರರಾಷ್ಟ್ರೀಯ ಕಾರ್ಮಿಕ ಸಮ್ಮೇಳನದ (ILC) ವಾರ್ಷಿಕ ಸಭೆಯಲ್ಲಿ 28 ದೇಶಗಳ ತಳಮಟ್ಟದ ಗಿಗ್ ಕಾರ್ಮಿಕ ಸಂಘಗಳ ಪ್ರತಿನಿಧಿಗಳೊಂದಿಗೆ (‘ಗಿಗ್ ವರ್ಕರ್ಸ್ ಯುನೈಟೆಡ್’), ಈಶಾ ಮತ್ತು ಮಂಜು. ಇಶಾ ಭಲ್ಲಮುಡಿ ಅವರಿಂದ ಒದಗಿಸಲಾದ ಚಿತ್ರ.

ನನ್ನ ಹೆಸರು ಮಂಜು. ನನಗೆ ಕಾರ್ಮಿಕ ಸಂಘಟನಾಕಾರಳಾಗಿ 17 ವರ್ಷಗಳ ಅನುಭವವಿದೆ. ಅಮೆಜಾನ್ ವೇರ್‌ಹೌಸ್‌ಗಳಲ್ಲಿನ ಕಾರ್ಮಿಕ ವ್ಯವಸ್ಥೆಗಳನ್ನು ಅನುಭವಿಸಿದ ನಂತರ, ಕಳೆದ 4 ವರ್ಷಗಳಿಂದ ಜನ್ ಪಹೆಲ್, GIPSWU ಹಾಗೂ ಗಿಗ್ ವರ್ಕರ್ಸ್ ಇಂಡಿಯಾ ಸೇರಿದಂತೆ ವಿವಿಧ ‘ಗಿಗ್’ ಕಾರ್ಮಿಕರ ಯೂನಿಯನ್‌ಗಳಲ್ಲಿ ಸಂಘಟನಾಕಾರಳಾಗಿ ತೊಡಗಿಸಿಕೊಂಡಿದ್ದೇನೆ. ಈ ಅವಧಿಯಲ್ಲಿ ಸುಮಾರು ೨೦ ಕಂಪನಿಗಳ ಕಾರ್ಮಿಕರನ್ನು ಸಂಘಟಿಸಿದ್ದೇನೆ, ಹಾಗೂ ಗಿಗ್ ಕಾರ್ಮಿಕರನ್ನು ರಕ್ಷಿಸುವ ಕಾನೂನುಗಳನ್ನು ರೂಪಿಸುವಂತೆ ಒತ್ತಾಯಿಸಲು ವಿವಿಧ ರಾಜ್ಯಗಳ ಕಾರ್ಮಿಕ ಸಚಿವಾಲಯಗಳೊಂದಿಗೆ ನಡೆದ ಸಮಾಲೋಚನೆಗಳಲ್ಲಿಯೂ ಭಾಗವಹಿಸಿದ್ದೇನೆ.

ಕಾರ್ಮಿಕ ಸಂಘಟನಾಕಾರರಾಗಿ ನಮ್ಮ ಉದ್ದೇಶ ಕಾರ್ಮಿಕರ ಸಮಸ್ಯೆಗಳನ್ನು ಸಾರ್ವಜನಿಕರ ಮುಂದಿಡುವುದು, ಪ್ರತಿಭಟನೆಗಳನ್ನು ಸಂಘಟಿಸುವುದು ಮತ್ತು ನಮ್ಮ ಬೇಡಿಕೆಗಳಿಗಾಗಿ ಹೋರಾಡುವುದು. ಆದರೆ ಶೈಕ್ಷಣಿಕ ವಲಯ, ನೀತಿ, ಮಾಧ್ಯಮ, ರಾಜಕೀಯ ಮತ್ತು ಇತರ ಪ್ರಭಾವಿ ವಲಯಗಳಲ್ಲಿರುವ ಮೇಲ್ಮಟ್ಟದ ಜನರಿಗೆ ನಮ್ಮ ಧ್ವನಿಯನ್ನು ತಲುಪಿಸಲು ಬೇಕಾದ ಸಂಪರ್ಕಗಳು ಮತ್ತು ಜಾಲಗಳು ನಮ್ಮ ಬಳಿ ಇರುವುದಿಲ್ಲ. ಸಂಶೋಧಕರು ವಿಷಯಗಳನ್ನು ದಾಖಲಿಸುವಲ್ಲಿ ಮತ್ತು ಬರೆದು ಮಂಡಿಸುವುದರಲ್ಲಿ ಪರಿಣತರು. ಅವರು ಇಂಗ್ಲಿಷ್‌ನಲ್ಲಿ ಬರೆಯುತ್ತಾರೆ ಮತ್ತು ಮಾತನಾಡುತ್ತಾರೆ. ಆದರೆ ನಮ್ಮ ಬಹುತೇಕ ಸಂವಹನ ಹಿಂದಿಯಲ್ಲಿ ನಡೆಯುತ್ತದೆ; ಅದು ಈ ಪ್ರಭಾವಿ ವಲಯಗಳಿಗೆ ಸುಲಭವಾಗಿ ತಲುಪುವುದಿಲ್ಲ. ಸಂಶೋಧಕರು ತಮ್ಮ ಬರಹಗಳನ್ನು ಪ್ರಕಟಿಸುತ್ತಾರೆ ಮತ್ತು ತಮ್ಮ ಜಾಲಗಳ ಮೂಲಕ ಹರಡುತ್ತಾರೆ. ನೆಲಮಟ್ಟದ ಅನುಭವ ಕಡಿಮೆ ಇದ್ದರೂ, ಯೋಜನಾ ಪ್ರಸ್ತಾವನೆಗಳು, ಪತ್ರಿಕಾ ಪ್ರಕಟಣೆಗಳು, ಪೋಸ್ಟರ್‌ಗಳು, ಸಭೆಗಳ ಟಿಪ್ಪಣಿಗಳು ಮುಂತಾದವುಗಳನ್ನು ತಯಾರಿಸಲು ಅವರು ಸಹಾಯ ಮಾಡಬಹುದು. ಇವೆಲ್ಲವೂ ಕಾರ್ಮಿಕ ಸಂಘಗಳಿಗೆ ಬಹಳ ಉಪಯುಕ್ತವಾದ ಕೌಶಲ್ಯಗಳು.

ನಿಜ ಹೇಳಬೇಕೆಂದರೆ, ಸಂಶೋಧಕರಿಂದ ಕೆಲಸ ಮಾಡಿಸಿಕೊಳ್ಳುವಲ್ಲಿ ಸಂಘಟನೆಗಳು ಸಾಕಷ್ಟು ಚಾಣಾಕ್ಷವಾಗಿವೆ! ಅನೇಕ ಸಂಶೋಧಕರು ಶ್ರಮಪಟ್ಟು ಕೆಲಸ ಮಾಡುತ್ತಾರೆ, ಒಳ್ಳೆಯ ಮನೋಭಾವ ಹೊಂದಿರುತ್ತಾರೆ, ಮತ್ತು ‘ಬೇಡ’ ಎಂದು ಹೇಳುವುದು ಅವರಿಗೆ ಕಷ್ಟವಾಗುತ್ತದೆ. ಹಲವು ಬಾರಿ ಸಂಶೋಧಕರು ಅವರ ಕೆಲಸದ ಬದಲು ಯೂನಿಯನ್ ಕೆಲಸದಲ್ಲಿ ಹೆಚ್ಚು ತೊಡಗಿಸಿರುವುದೂ ಉಂಟು.

ಸಂಶೋಧಕರು ಗಿಗ್ ಕಾರ್ಮಿಕರ ಸಂಘಟನೆಗಳಿಗೆ ಹೇಗೆ ನೆರವಾಗಬಹುದು ಎಂಬುದರ ಬಗ್ಗೆ ನನಗೆ ಕೆಲವು ಸಲಹೆಗಳಿವೆ. ಮೊದಲನೆಯದಾಗಿ, ನಿಮ್ಮ ಸಂಶೋಧನಾ ಫಲಿತಾಂಶಗಳನ್ನು ಕಾರ್ಮಿಕರೊಂದಿಗೆ ಹಂಚಿಕೊಳ್ಳಿ ಮತ್ತು ನಮ್ಮ ವಾಸ್ತವ ಕಥೆಗಳನ್ನು ಪ್ರಮುಖವಾಗಿ ಮುಂದಿಡಿ. ಕಾರ್ಮಿಕರ ಸಮಸ್ಯೆಗಳ ಬಗ್ಗೆ ಜನರು ಬರೆಯುತ್ತಿರುವುದನ್ನು ನೋಡಿದಾಗ ನಮಿಗೆ ಸಂತೋಷವಾಗುತ್ತದೆ ಮತ್ತು ಆತ್ಮವಿಶ್ವಾಸ ಮೂಡುತ್ತದೆ. ಒಬ್ಬ ಸ್ಲಮ್ಮಿನಲ್ಲಿ ವಾಸಿಸುತ್ತಿರುವ ಕಾರ್ಮಿಕ ತಮ್ಮ ಫೋಟೊ ಪತ್ರಿಕೆಯಲ್ಲಿ ಬಂದರೆ ಎಷ್ಟು ಹೆಮ್ಮೆ ಪಡುತ್ತಾರಲ್ಲವೆ? ಸಾಧ್ಯವಾದರೆ, ನಿಮ್ಮ ಅಧ್ಯಯನದಲ್ಲಿ ಭಾಗವಹಿಸಿದ ಕಾರ್ಮಿಕರನ್ನು ಗುರುತಿಸಿ ಮತ್ತು ಅವರಿಗೆ ಮಾನ್ಯತೆ ನೀಡಿ. ಒಂದು ಚಿತ್ರ ಪ್ರದರ್ಶನ, ಪುಸ್ತಕ ಬಿಡುಗಡೆ ಅಥವಾ ಮಾಧ್ಯಮ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿ. ಇದರಿಂದ ನಮಗೆ ಬಹಳ ಗೌರವ ಸಿಕ್ಕಂತೆ ಅನಿಸುತ್ತದೆ. ಅದು ಇನ್ನಷ್ಟು ಜನರನ್ನು ಹೋರಾಟಕ್ಕೆ ಸೇರಲು ಪ್ರೇರಪಿಸುತ್ತದೆ. ಜೊತೆಗೆ, ಹೊಸ ಜನರೊಂದಿಗೆ ಸಂಪರ್ಕ ಬೆಳೆಸಲು ಮತ್ತು ನಮ್ಮ ಜಾಲಗಳನ್ನು ವಿಸ್ತರಿಸಲು ಸಹ ಸಹಾಯ ಮಾಡುತ್ತದೆ. ಆದ್ದರಿಂದ ನೀವು ಬರೆದ ಪುಸ್ತಕಗಳು, ಲೇಖನಗಳು ಅಥವಾ ತಯಾರಿಸಿದ ವೀಡಿಯೊಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಯಾರಾದರೂ ನನ್ನ ವಿಳಾಸ ಕೇಳಿ ಪುಸ್ತಕ ಕಳುಹಿಸಿದರೆ ನನಗೆ ತುಂಬಾ ಸಂತೋಷವಾಗುತ್ತದೆ. ನಾನು ಅದನ್ನು ಎಲ್ಲರಿಗೂ ತೋರಿಸುತ್ತೇನೆ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತೇನೆ. ಅದು ನಮಗೆ ಖ್ಯಾತಿ ಹಾಗೂ ಗೌರವ ತಂದುಕೊಡುತ್ತದೆ.

ಇನ್ನೊಂದು ರೀತಿಯಲ್ಲಿ ನೀವು ನಮಗೆ ಸಹಾಯ ಮಾಡಬಹುದಾದುದು, ನಮಗೆ ಕೆಲವು ಕೌಶಲ್ಯಗಳನ್ನು ಕಲಿಸುವ ಮೂಲಕ. ಪತ್ರಿಕಾ ಪ್ರಕಟಣೆ ಬರೆಯುವುದು, ಟಿಪ್ಪಣಿಗಳನ್ನು ಸಿದ್ಧಪಡಿಸುವುದು, ಪೋಸ್ಟರ್‌ಗಳನ್ನು ತಯಾರಿಸುವುದು, ಆನ್ಲೈನ್ ಸಭೆಗಳನ್ನು ಏರ್ಪಡಿಸುವುದು – ಇಂತಹ ದಿನನಿತ್ಯದ ಹಲವಾರು ಕೆಲಸಗಳನ್ನು ಸಂಶೋಧಕರು ಮಾಡುತ್ತಾರೆ. ಆದರೆ ನಿಮ್ಮ ಸ್ಟಡಿ ಮುಗಿದ ನಂತರ ನೀವು ಹೊರಟು ಹೋಗುತ್ತೀರಿ. ಆದ್ದರಿಂದ ವಾರಕ್ಕೊಮ್ಮೆ ಅಥವಾ ತಿಂಗಳಿಗೆ ಕೆಲ ಗಂಟೆಗಳಾದರೂ ಈ ಕೌಶಲ್ಯಗಳನ್ನು ನಮಗೆ ಕೆಲಿಸಿ. ಹೀಗೆ ಮಾಡಿದರೆ ನಾವು ಈ ಕೆಲಸಗಳನ್ನು ಸ್ವತಂತ್ರವಾಗಿ ಮಾಡಬಹುದು; ಯಾರ ಒಳ್ಳೆಯ ಮನಸ್ಸಿನ ಮೇಲೆ ಅವಲಂಬಿತರಾಗಬೇಕಾಗುವುದಿಲ್ಲ.

ಕೆಲವೇ ತಿಂಗಳಲ್ಲಿ ಸಾಕಷ್ಟು ವಿಷಯಗಳನ್ನು ಕಲಿಯಬಹುದು. ಉದಾಹರಣೆಗೆ, X ನಲ್ಲಿ ಪೋಸ್ಟ್ ಮಾಡುವುದು ಹೇಗೆ? ಲಿಂಕ್ಡ್‌ಇನ್ ಬಳಸುವುದು ಹೇಗೆ? AI ಉಪಕರಣಗಳನ್ನು ಹೇಗೆ ಬಳಸುವುದು? Canva ಬಳಸಿ ಪೋಸ್ಟರ್ ತಯಾರಿಸುವುದು ಹೇಗೆ? ಬ್ಲಾಗ್ ಪೋಸ್ಟ್ ಪ್ರಕಟಿಸುವುದು ಹೇಗೆ? ಇವೆಲ್ಲವನ್ನು ಕಲಿಯುವುದು ನಮಗೆ ತುಂಬಾ ಉಪಯುಕ್ತವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ವಲ್ಪವಾದರೂ ಇಂಗ್ಲಿಷ್ ತಿಳಿದಿರಬೇಕು. ಇಲ್ಲದಿದ್ದರೆ ಅನೇಕ ಅವಕಾಶಗಳು ಮತ್ತು ಆದಾಯದ ಸಾಧ್ಯತೆಗಳು ಕೈ ತಪ್ಪುತ್ತವೆ. ಆದ್ದರಿಂದ ನೀವು ನಮ್ಮ ಜೊತೆ ಕೆಲಸ ಮಾಡುವ ಅವಧಿಯಲ್ಲಿ ಸರಳ ಇಂಗ್ಲಿಷ್ ಮಾತನಾಡುವುದನ್ನೂ ಕಲಿಸಿದರೆ ತುಂಬಾ ಸಹಾಯವಾಗುತ್ತದೆ.

ಕೆಲವೊಮ್ಮೆ ಸಂಘಟನೆಗಳೂ ಸಂಶೋಧಕರ ಮೇಲೆ ಅತಿಯಾದ ಕೆಲಸದ ಹೊರೆ ಹಾಕುತ್ತವೆ. ಒಬ್ಬ ವ್ಯಕ್ತಿ ಎಷ್ಟು ಕೆಲಸ ಮಾಡಬಲ್ಲ? ಆದ್ದರಿಂದ ನನ್ನ ಸಲಹೆ ಏನೆಂದರೆ, ನಿಮ್ಮ ಅಧ್ಯಯನ ಮುಗಿದ ನಂತರ ಸಂಪೂರ್ಣವಾಗಿ ದೂರವಾಗಬೇಡಿ. ಒಂದು ಗುಂಪನ್ನು ರಚಿಸಬಹುದು. ನಿಮಿಗೆ ಸಮಯವಿದ್ದಾಗ, ಆಗಾಗ, ಅದರಲ್ಲಿ ಸೇರಿ ನಮ್ಮ ಪ್ರಶ್ನೆಗಳಿಗೆ ಉತ್ತರಿಸಬಹುದು, ನಮ್ಮೊಂದಿಗೆ ಸಂಪರ್ಕದಲ್ಲಿರಬಹುದು.

ಕೊನೆಯದಾಗಿ, ನಿಮ್ಮ ಅಧ್ಯಯನದಲ್ಲಿ ಭಾಗವಹಿಸುವ ಸಂಘಟನಾಕಾರರ ಆರ್ಥಿಕ ಬೆಂಬಲ ನೀಡುವ ಸೃಜನಾತ್ಮಕ ಮಾರ್ಗಗಳನ್ನು ಹುಡುಕುವಂತೆ ನಾನು ವಿನಂತಿಸುತ್ತೇನೆ. ಉದಾಹರಣೆಗೆ, ಕೆಲವು ತಿಂಗಳುಗಳ ಕಾಲ ಸಣ್ಣ ಪ್ರಮಾಣದ ಮಾಸಿಕ ಸಹಾಯಧನ ನೀಡುವುದು, ಅಥವಾ ಅಧ್ಯಯನದಲ್ಲಿ ನಮ್ಮನ್ನು ಸಹಯೋಗಿಗಳಾಗಿ ಸೇರಿಸುವುದು – ಇಂತಹ ಬೆಂಬಲವು ಆರ್ಥಿಕ ಅಸುರಕ್ಷತೆಯ ನಡುವೆ ಕೆಲಸ ಮಾಡುತ್ತಿರುವ ಸಂಘಟನಾಕಾರರಿಗೆ ಬಹಳ ನೆರವಾಗುತ್ತದೆ.


ಈ ಪೋಸ್ಟ್ ಅನ್ನು ಕೊಡುಗೆ ಸಂಪಾದಕಿ ಮಿಸ್ರಿಯಾ ಶೇಕ್ ಅಲಿ ಅವರು ಸಂಗ್ರಹಿಸಿದ್ದಾರೆ ಮತ್ತು ಕೊಡುಗೆ ಸಂಪಾದಕಿ ಕನಿಕ್ಕ ಸೆರ್ಸಿಯಾ ಅವರು ಪರಿಶೀಲಿಸಿದ್ದಾರೆ.

ಟಿಪ್ಪಣಿಗಳು

ಕಾವೇರಿ ಮೇದಪ್ಪ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಭೂಗೋಳಶಾಸ್ತ್ರದಲ್ಲಿ ಸ್ನಾತಕೋತ್ತರ ಸಂಶೋಧನಾ ಮಾನವಶಾಸ್ತ್ರಜ್ಞರಾಗಿದ್ದಾರೆ. ಅವರ ಸಂಶೋಧನೆ ಮತ್ತು ಬೋಧನಾ ಆಸಕ್ತಿಗಳು ಸಾಮಾನ್ಯವಾಗಿ ಕಾರ್ಮಿಕ ಮಾನವಶಾಸ್ತ್ರ, ವಿಮರ್ಶಾತ್ಮಕ ಚಲನಶೀಲತೆ ಅಧ್ಯಯನಗಳು, ಅಭಿವೃದ್ಧಿ ರಾಜಕೀಯ ಮತ್ತು ಸ್ತ್ರೀವಾದಿ ರಾಜಕೀಯ ಆರ್ಥಿಕತೆಯ ವ್ಯಾಪ್ತಿಯಲ್ಲಿ ಬರುತ್ತವೆ.

ಕೃತಜ್ಞತೆಗಳು

ಈ ಲೇಖನ ಸಾಧ್ಯವಾಗಲು ತಮ್ಮ ಸಮಯವನ್ನು ನೀಡಿದ ಮಂಜು, ನಯೀಮ್ ಭಾಯ್ ಮತ್ತು ಜಾವೇದ್ ಅವರಿಗೆ ಗೌರವಧನ ಒದಗಿಸಲು ನಿಧಿ ಸಂಗ್ರಹಣೆಯನ್ನು ಆಯೋಜಿಸಿದ Labor Tech Research Network ಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ಈ ನಿಧಿ ಸಂಗ್ರಹಣೆಗೆ ಸ್ಪಂದಿಸಿ ಕೊಡುಗೆ ನೀಡಿದ ಎಲ್ಲ ವ್ಯಕ್ತಿಗಳಿಗೂ ನಾವು ಆಭಾರಿಯಾಗಿದ್ದೇವೆ. ಅವರ ಸಹಕಾರವಿಲ್ಲದೆ ಈ ಲೇಖನ ಸಾಧ್ಯವಾಗುತ್ತಿರಲಿಲ್ಲ.ಈ ಪ್ರಯತ್ನವನ್ನು ಒಗ್ಗೂಡಿಸಿದ ಕಾವೇರಿ ಮೇದಪ್ಪ ಅವರಿಗೂ ಧನ್ಯವಾದಗಳು.ಈ ಲೇಖನವನ್ನು ಹಿಂದಿ, ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಅನುವಾದಿಸಲು ಉದಾರತೆ ಮತ್ತು ಕಾಳಜಿಯಿಂದ ಸಹಕರಿಸಿದ ಅಂಬಿಕಾ ಟಂಡನ್, ಕಾವೇರಿ ಮೇದಪ್ಪ, ಮತ್ತು ಶೃತಿ ರಂಜನಿ ಅವರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.

ಉಲ್ಲೇಖಗಳು

ನಗರ್, ರಿಚಾ. 2019. ಹಂಗ್ರಿ ಟ್ರಾನ್ಸ್‌ಲೇಷನ್ಸ್: ರಿಲರ್ನಿಂಗ್ ದ ವರ್ಲ್ಡ್ ತ್ರೂ ರಾಡಿಕಲ್ ವಲ್ನರಬಿಲಿಟಿ. ಶಾಂಪೇನ್, ಇಲಿನಾಯ್ಸ್ : ಯೂನಿವರ್ಸಿಟಿ ಆಫ್ ಇಲಿನಾಯ್ಸ್ ಪ್ರೆಸ್.

Leave a Reply

Your email address will not be published. Required fields are marked *